ಇರಿಡೇಸಿ
ಏಕದಳ ಸಸ್ಯಗಳ ಒಂದು ಕುಟುಂಬ. 60 ಜಾತಿಗಳೂ 600 ಪ್ರಭೇದಗಳೂ ಇವೆ. ಉಷ್ಣ ಮತ್ತು ಸಮಶೀತೋಷ್ಣವಲಯಗಳಲ್ಲಿ ಚೆನ್ನಾಗಿ ಬೆಳೆಯಬಲ್ಲುವು. ಭಾರತದಲ್ಲಿ ಬೆಳೆಯುವ ಜಾತಿಗಳು ಮೂರು-ಐರಿಸ್, ಬೆಲಮ್‍ಕಾಂಡ ಮತ್ತು ಸಿಪುರ.

	ಗುಣಗಳು: ಇರಿಡೇಸಿ ಕುಟುಂಬದ ಸಸ್ಯಗಳು ಸಾಮಾನ್ಯವಾಗಿ ಬಹುವಾರ್ಷಿಕ ಮೂಲಿಕೆಗಳು: ಗೆಡ್ಡೆಗಳು ಬಹುತೇಕ ಒಳಗಿರುತ್ತವೆ. ಕಾಂಡದ ಕೆಳಗೆ ಎಲೆಗಳು ಗುಂಪು ಗುಂಪಾಗಿ ಮೂಡುತ್ತವೆ. ಪುಷ್ಪಗಳು ನೇರವಾದ ಇಲ್ಲವೇ ಸೊಟ್ಟನೆಯ ಪೇರಿಯಾಂತ್ ಕೊಳವಿ ಇರುವ ದ್ವಿಲಿಂಗ ಜಾತಿಯವು. ಅಲ್ಲಲ್ಲಿ ಬೇರೆ ಬೇರೆ ಬಣ್ಣಗಳ ಮಚ್ಚೆ ಗಳಿರುವುದರಿಂದ ಈ ಪುಷ್ಪಗಳು ನೋಡಲು ಬಲು ಸುಂದರ. ಪೆರಿಯಾಂತ್ ವರ್ಣಮಯವಾಗಿದೆ. ಇದರಲ್ಲಿ ಎರಡು ವೃತ್ತಗಳಲ್ಲಿ ಆರು ದಳಗಳಿವೆ. ದಳಗಳ ಆಕೃತಿಗಳು ಬೇರೆ ಬೇರೆ ಆಗಿರುವುದುಂಟು. ಸಿಸಿರಿಂಖಿಯೆಯನ್ನು ಬಿಟ್ಟರೆ ಸಾಮಾನ್ಯವಾಗಿ ಹೂಗೊಂಚಲು ಸೈಮೋಸ್ ರೀತಿಯದು. ಕೇಸರಗಳ ಸಂಖ್ಯೆ ಮೂರು. ಇವು ಸಾಮಾನ್ಯವಾಗಿ ಪೇರಿಯಾಂತಿನ ಹೊರದಳಗಳಿಗೆ ಅಭಿಮುಖವಾಗಿವೆ. ಕೇಸರದಂಡಗಳು ಬಿಡಿಬಿಡಿಯಾಗಿಯೋ ಅಥವಾ ಸ್ವಲ್ಪಮಟ್ಟಿಗೆ ಕೂಡಿಕೊಂಡೋ ಇರುವುವು. ಪರಾಗಕೋಶಗಳಲ್ಲಿ ಎರಡೆರಡು ಭಾಗಗಳಿವೆ. ಇವು ಬಲಿತಮೇಲೆ ಉದ್ದನೆಯ ರಂಧ್ರಗಳು ಮೂಡಿ ಪರಾಗರೇಣುಗಳು ಹೊರಬಂದು ಪರಾಗಸ್ಪರ್ಶ ಕಾರ್ಯಕ್ಕೆ ಸಹಕಾರಿಯಾಗುವುವು. ಅಂಡಾಶಯ ಸಾಮಾನ್ಯವಾಗಿ ನೀಚಸ್ಥಾನದಲ್ಲಿದೆ. ಕೆಲವು ಸಸ್ಯಗಳಲ್ಲಿ ಉಚ್ಚಸ್ಥಾನದಲ್ಲಿರುವುದೂ ಉಂಟು. ಅಂಡಾಶಯದಲ್ಲಿ ಮೂರು ಕೋಣೆಗಳಿದ್ದರೆ ಅಂಡಕಗಳು ಆಕ್ಸೈಲ್ ಪ್ಲಾಸೆಂಟಕ್ಕೆ ಸೇರಿಕೊಂಡಿರುತ್ತವೆ. ಹೀಗಲ್ಲದೆ ಒಂದೇ ಕೋಣೆ ಇದ್ದರೆ ಸಾಮಾನ್ಯವಾಗಿ ಅದಕ್ಕೆ ಮೂರು ಪೆರೈಟಲ್ ಪ್ಲಾಸೆಂಟಗಳಿರುವುವು. ಅಂಡಾಶಯದ ಮೇಲಿರುವ ಶಲಾಕನಳಿಕೆಯ ಮೇಲುಭಾಗದಲ್ಲಿ ಮೂರು ವಿಭಾಗಗಳಿವೆ. ಪ್ರತಿ ಅಂಡಾಶಯದಲ್ಲೂ ಇರುವ ಅಂಡಕಗಳು ಅನೇಕ; ಅವುಗಳ ಜಾತಿ ಅನಟ್ರೋಪಸ್, ಬೀಜಗಳೊಳಗೆ ಸ್ವಲ್ಪ ಭ್ರೂಣಾಹಾರವೂ ಚಿಕ್ಕದೊಂದು ಭ್ರೂಣವೂ ಇವೆ. ಫಲ ಕ್ಯಾಪ್ಸೂಲ್ ಮಾದರಿಯದು.

	ಇರಿಡೇಸಿ ಕುಟುಂಬವನ್ನು ಡಯೆಲ್ಸ್ ಎಂಬಾತ ಮೂರು ಗುಂಪುಗಳಾಗಿ ವರ್ಗೀಕರಿಸಿದ್ದಾನೆ. 1. ಸಿಸಿರಿಂಖೆ ಉದಾ: ಸಿಪುರ ಮತ್ತು ಕ್ರೂಕೆಸ್. 2. ಇಕ್ಸಿಯೆ, ಉದಾ: ಗ್ಲಾಡಿಯೋಲಸ್ ಮತ್ತು ಮೈಕ್ರಾಂಥಸ್. 3. ಮೊರೇಯಿಯ, ಉದಾ: ಐರಿಸ್, ಮೊರೇಯಿಯ.

	ಆರ್ಥಿಕದೃಷ್ಟಿಯಿಂದ ಇರಿಡೇಸಿಗೆ ಬಲು ಪ್ರಾಮುಖ್ಯವುಂಟು. ಐರಿಸ್ ಜಮ್ರ್ಯಾನಿಕ ಮತ್ತು ಐರಿಸ್ ಫ್ಲಾರೆನ್ಷಿಯಾನ ಗಿಡಗಳ ಗೆಡ್ಡೆಗಳಿಂದ ಒಂದು ಬಗೆಯ ಸುಗಂಧದ್ರವ್ಯ ತೆಗೆಯುತ್ತಾರೆ. ಕ್ರೋಕಸ್ ಸಟೈವಸ್ ಸಸ್ಯದ ಒಣಗಿದ ಶಲಾಕಾಗ್ರಗಳಿಂದ ಕುಂಕುಮಕೇಸರಿ ಪಡೆಯುತ್ತಾರೆ. ಐರಿಸ್ ಪೊಟಿಡಿಸಿಮ ಗಿಡದ ಗೆಡ್ಡೆಯ ರಸ ಹಿಸ್ಟ್ರೀರಿಯ ಕಾಯಿಲೆಯಲ್ಲಿ ಔಷಧವಾಗಿ ಬಳಕೆಯಲ್ಲಿದೆ.
(ಎಸ್.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ